ನಗ್ನಬೀಜ ಸಸ್ಯಗಳು -
ಬೀಜಸಸ್ಯಗಳ ಒಂದು ಪ್ರಮುಖ ಗುಂಪು (ಜಿಮ್ನೋಸ್ಪರ್ಮ್). ಬೀಜಸಸ್ಯಗಳನ್ನು ಸಾಮಾನ್ಯವಾಗಿ ನಗ್ನಬೀಜಸಸ್ಯಗಳು ಮತ್ತು ಆವೃತಬೀಜಸಸ್ಯಗಳು ಎಂಬ ಎರಡು ಪ್ರಧಾನ ಗುಂಪುಗಳನ್ನಾಗಿ ವರ್ಗೀಕರಿಸಲಾಗಿದೆ. ಆವೃತಬೀಜಸಸ್ಯಗಳಲ್ಲಿ ಅಂಡಕಗಳು ಅಂಡಾಶಯದಿಂದ ಆವೃತಗೊಂಡಿರುತ್ತವೆ. ಆದರೆ ನಗ್ನಬೀಜಸಸ್ಯಗಳಲ್ಲಿ ಅಂಡಕಗಳು ಈ ರೀತಿ ಆವೃತವಾಗಿರದೆ ಬಹಿರಂಗವಾಗಿರುತ್ತವೆ. ಮೇಲಿನ ಅಂಶ ಇವೆರಡು ಗುಂಪುಗಳ ನಡುವಣ ಒಂದು ಉತ್ತಮ ವ್ಯತ್ಯಾಸವಾಗಿದೆಯಾದರೂ ಕೆಲವು ನಗ್ನಬೀಜಸಸ್ಯಗಳ ಶಂಕುಗಳಲ್ಲಿನ ಬೀಜಗಳು ಪಟ್ಟೆಗಳ ನಡುವೆ ಮುಚ್ಚಿಹೋಗಿರುತ್ತವೆ. ಇಲ್ಲವೆ ಆಳವಾಗಿ ಹೂತುಹೋಗಿರುತ್ತವೆ. ಅಂತೆಯೇ ಕೆಲವು ಆವೃತಬೀಜಸಸ್ಯಗಳಲ್ಲಿ ಅಂಡಕಗಳು ತೆರೆದ ಕಾರ್ಪೆಲ್‍ಗಳಲ್ಲಿ ಸ್ಥಿತವಾಗಿದ್ದು ಬಹಿರಂಗ ಸ್ಥಿತಿಯಲ್ಲಿರುತ್ತವೆ. ಆದರೆ ಪರಾಗ ಮೊಳೆಯುವ ಕ್ರಮದಲ್ಲಿ ಮಾತ್ರ ಎರಡು ಗುಂಪುಗಳ ನಡುವೆ ವ್ಯತ್ಯಾಸವನ್ನು ಕಾಣಬಹುದು. ಆವೃತಬೀಜಸಸ್ಯಗಳಲ್ಲಿ ಪರಾಗನಳಿಕೆ ಶಲಾಕನಳಿಕೆಯ ಮೂಲಕ ಅಂಡಕವನ್ನು ಪ್ರವೇಶಿಸಿದರೆ ನಗ್ನಬೀಜಸಸ್ಯಗಳಲ್ಲಿ ಅದು ನೇರವಾಗಿ ಅಂಡಕವನ್ನು ಪ್ರವೇಶಿಸುತ್ತದೆ.

	ಎಲ್ಲ ನಗ್ನಬೀಜಸಸ್ಯಗಳಲ್ಲೂ ಸಂತತಿ ಪರ್ಯಾಯವುಂಟು. ಜೀವನಚಕ್ರದ ಪ್ರಧಾನ ಹಂತ ಬೀಜಾಣುಜನಕದ್ದು. ವಿಕಾಸದಲ್ಲಿ ಹಿಂದುಳಿದಿರುವ ಬ್ರಯೋಫೈಟ, ಟೆರಿಡೋಫೈಟಗಳಂತಲ್ಲದೆ ಲಿಂಗಾಣುಜನಕಗಳು ಇಲ್ಲಿ ಕ್ಷೀಣಿಸಿವೆ. ಇವು ಸಣ್ಣ ಗಾತ್ರದವು. ಹೆಣ್ಣು ಲಿಂಗಾಣುಜನಕದ ಬೆಳವಣಿಗೆ ಅಂಡಕದೊಳಗೇ ಆಗುತ್ತದೆ. ಪರಾಗ, ಗಾಳಿಯಿಂದ ಅಥವಾ ಕೀಟಗಳಿಂದ ಅಂಡಕದ ಸಾಮೀಪ್ಯ ಸಾಧಿಸುತ್ತದೆ.

	ನೀಟಮ್ ಮತ್ತು ವೆಲ್ವಿಶ್ಚಿಯಗಳನ್ನು ಬಿಟ್ಟರೆ, ನಗ್ನಬೀಜ ಸಸ್ಯಗಳ ಗಂಡು ಲಿಂಗಾಣುಜನಕಗಳು, ಆವೃತಬೀಜ ಸಸ್ಯಗಳ ಲಿಂಗಾಣುಜನಕಗಳಿಗಿಂತ ಹೆಚ್ಚು ಬಂಜೆಕೋಶಗಳನ್ನು ಉತ್ಪಾದಿಸುತ್ತದೆ. ಹೆಣ್ಣು ಲಿಂಗಾಣುಜನಕಗಳಿಗೆ ಸಂಬಂಧಪಟ್ಟಂತೆಯೂ ಒಂದು ಮುಖ್ಯ ವ್ಯತ್ಯಾಸವುಂಟು. ನಗ್ನಬೀಜ ಸಸ್ಯಗಳ ಹೆಣ್ಣು ಲಿಂಗಾಣುಜನಕಗಳು ದೊಡ್ಡ ಗಾತ್ರದವು ಮತ್ತು ನೀಟಮ್ ಹಾಗೂ ವೆಲ್ವಿಶ್ಚಿಯಗಳನ್ನು ಬಿಟ್ಟರೆ ಉಳಿದ ನಗ್ನಬೀಜಸಸ್ಯಗಳಲ್ಲಿ ಆರ್ಕಿಗೋನಿಯಗಳಿವೆ. ಬಹುಭ್ರೂಣತೆಯ (ಪಾಲಿಎಂಬ್ರಿಯಾನಿ) ಲಕ್ಷಣದಲ್ಲೂ ನಗ್ನಬೀಜಸಸ್ಯಗಳು ಆವೃತಬೀಜ ಸಸ್ಯಗಳನ್ನು ಮೀರಿಸಿವೆ. ಒಳರಚನೆಯಲ್ಲೂ ಈ ಎರಡು ಗುಂಪುಗಳ ನಡುವೆ ಕೆಲವು ಮುಖ್ಯ ವ್ಯತ್ಯಾಸಗಳನ್ನು ಕಾಣಬಹುದು. ನಗ್ನಬೀಜಸಸ್ಯಗಳ ಫ್ಲೋಯೆಮಿನ ಜರಡಿಕೋಶಗಳ ಜೊತೆ (ಇವು ಜರಡಿ ನಳಿಕೆಗಳೆಂದು ಕರೆಸಿಕೊಳ್ಳುವಷ್ಟು ವಿಶಿಷ್ಟತೆ ಪಡೆದಿಲ್ಲ) ಸಂಗಾತಿ ಜೀವಕೋಳಗಳಿಲ್ಲ. ಆವೃತಬೀಜಸಸ್ಯಗಳ ವೈಶಿಷ್ಟ್ಯಪೂರ್ಣ ಟ್ರೇಕಿಯಗಳು ನಗ್ನಬೀಜಸಸ್ಯಗಳಲ್ಲಿ (ನೀಟೇಲಿಸ್‍ನಲ್ಲಿ ಕಂಡುಬಂದರೂ ಅವುಗಳ ಉಗಮ ಮತ್ತು ವಿಕಸನಗಳು ಬೇರೆ ಬಗೆಯವು).

	ಜೀವಂತ ನಗ್ನಬೀಜಸಸ್ಯಗಳು ದಾರುಮಯ ಬಹುವಾರ್ಷಿಕ ಸಸ್ಯಗಳಾಗಿವೆ. ಬಹುಪಾಲು ಸಸ್ಯಗಳು ನಿತ್ಯಹರಿದ್ವರ್ಣವೃಕ್ಷಗಳಾಗಿದ್ದು ಕೆಲವು ಮಾತ್ರ ಪೊದೆಗಳ ರೂಪದಲ್ಲಿ ಬೆಳೆಯುವುವು. ಶಂಕುವೃಕ್ಷಗಳ ಪ್ರಭೇದವೊಂದಾದ ಪೋಡೋಕಾರ್ಪಸ್ ಉಸ್ಟಸ್ ಎಂಬುದು ಪರಾವಲಂಬಿಯೆಂದು ಹೇಳಲಾಗಿದೆ. ಇವುಗಳ ಬಾಹ್ಯ ಸ್ವರೂಪವೂ ಕೂಡ ವೈವಿಧ್ಯಮಯವಾದುದೇ. ತಾಳಕಲ್ಪಗಳು ತೆಂಗಿನ ಇಲ್ಲವೇ ವೃಕ್ಷಫರ್ನ್‍ಗಳ ಸ್ವರೂಪ ಪಡೆದಿದ್ದರೆ ಶಂಕುವೃಕ್ಷಗಳು ಶಂಕುವಿನಾಕಾರಕ್ಕೆ ಬೆಳೆಯುತ್ತವೆ. ನೀಟಮಿನ ಕೆಲವು ಪ್ರಭೇದಗಳು ಉಷ್ಣವಲಯದ ಮಳೆ ಕಾಡುಗಳಲ್ಲಿ ದೈತ್ಯಾಕಾರದ ಅಡರುಬಳ್ಳಿಗಳಾಗಿ ಬೆಳೆಯುವುವು. ಕೆಲವು ಪೊದೆಗಳಂತಿದ್ದರೆ ಮತ್ತೆ ಕೆಲವು ಚಿಕ್ಕವಯಸ್ಸಿನಲ್ಲಿ ಶಂಕುವಿನಾಕಾರಕ್ಕಿದ್ದು ವಯಸ್ಸಾದಂತೆ ವಿಪರೀತ ಕವಲೊಡೆಯುವಿಕೆಯಿಂದಾಗಿ ಅನಿಯತ ಆಕಾರ ಪಡೆಯುತ್ತವೆ. ಕೆಲವು ಸಸ್ಯಗಳು ಕೇವಲ 5 ಸೆಂ ಮೀ.ಗಳಷ್ಟು ಚಿಕ್ಕವಾಗಿದ್ದರೆ (ಉದಾ: eóÉೀಮೀಯ ಪಿಗ್ಮೀಯ) ಅನೇಕ ಶಂಕುವೃಕ್ಷಗಳು ಬೃಹದ್ಗಾತ್ರದ ಗಗನಚುಂಬಿಗಳೂ (ಉದಾ.112 ಮೀಟರುಗಳಷ್ಟು ಎತ್ತರ ಬೆಳೆಯುವ ಸಿಕೋಯ ಸೆಂಪರ್‍ವಿರೆನ್ಸ್). ಕೆಲವು ಸಸ್ಯಗಳು ಅಲ್ಪಾಯುಗಳಾದರೆ ಮತ್ತೆ ಕೆಲವು ದೀರ್ಘಜೀವಿಗಳು (ಅಮೆರಿಕದ ಕ್ಯಾಲಿಫೋರ್ನಿಯದ ಬೆಟ್ಟಗಳಲ್ಲಿರುವ ಪೈನಸ್ ಅರಿಸ್ಟೇಟ ಸಸ್ಯಕ್ಕೆ 4,000 ವರ್ಷ ವಯಸ್ಸಾಗಿದೆ ಎನ್ನಲಾಗಿದೆ). ಹೀಗೆ ದೀರ್ಘಾಯುಗಳೂ ಪ್ರಪಂಚದ ಸಸ್ಯಗಳಲ್ಲೆಲ್ಲ ಅತಿ ಎತ್ತರಕ್ಕೆ ಬೆಳೆಯುವ ಸಸ್ಯಗಳೂ ಈ ಗುಂಪಿನಲ್ಲಿರುವುದರಿಂದ ಇವುಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗಳು ಕಳೆದ ಶತಮಾನದಿಂದ ಬಿರುಸಾಗಿ ಸಾಗಿವೆ.

	ನಗ್ನಬೀಜಸಸ್ಯಗಳಲ್ಲಿ ಇತರ ಸಸ್ಯಗುಂಪುಗಳಲ್ಲಿರುವಂತೆಯೇ ಅನೇಕ ಪಳೆಯುಳಿಕೆ ಗುಂಪುಗಳಿವೆ. ಟೆರಿಡೋಸ್ಪರ್ಮೇಲೀಸ್, ಬೆನಟೈಟೇಲೀಸ್, ಪೆಂಟೋಕ್ಸೈಲೇಲೀಸ್, ಕಾರ್ಡೈಟೇಲೀಸ್ ಮತ್ತು ಗತವಂಶಿ ಶಂಕುವೃಕ್ಷಗಳು ಈ ಪೈಕಿ ಕೆಲವು ಪ್ರಧಾನ ಗುಂಪುಗಳಾಗಿವೆ. ಈಗಿರುವ ಅನೇಕ ನಗ್ನಬೀಜಸಸ್ಯಗಳನ್ನು ಜೀವಂತ ಪಳೆಯುಳಿಕೆಗಳು ಎಂದು ಕರೆಯುವ ವಾಡಿಕೆ ಇದೆ. ಇದಕ್ಕೆ ಕಾರಣ ಅವುಗಳ ಮತ್ತು ಪ್ರಾಚೀನ ಕಾಲದ ಅವುಗಳ ಪೂರ್ವಜಸಸ್ಯಗಳ ನಡುವಣ ಸಾಮ್ಯ.

	ನಗ್ನಬೀಜಸಸ್ಯಗಳ ಪ್ರಾಚೀನ ಇತಿಹಾಸವನ್ನು ಪೇಲಿಯೊಜೋಯಿಕ್ ಕಾಲದವರೆಗೂ ಗುರುತಿಸಲಾಗಿದೆ. ಇವುಗಳ ಪ್ರಧಾನ ಶಾಖೆಗಳ ಇತಿಹಾಸವನ್ನು ಮತ್ತು ಇವುಗಳ ಸಂಭವನೀಯ ಉಗಮ ಹಾಗೂ ವಿಕಾಸಗಳನ್ನು ನಾವು ಕೂಲಂಕಷವಾಗಿ ಗಮನಿಸಿದರೆ, ಅವು ಮೀಸೋಜೋಯಿಕ್ ಯುಗದಲ್ಲಿ ಪ್ರಧಾನ ಸಸ್ಯಗಳಾಗಿರುವುದು ಎದ್ದು ಕಾಣುತ್ತದೆ.

	ವರ್ಗೀಕರಣ: ಎಲ್ಲ ಬಗೆಯ ವರ್ಗೀಕರಣ ಪದ್ಧತಿಗಳಲ್ಲೂ ನಗ್ನಬೀಜಸಸ್ಯಗಳನ್ನು (ಕೆಲವು ಅಪವಾದಗಳನ್ನು ಬಿಟ್ಟು) ಟೆರಿಡೋಫೈಟ ಮತ್ತು ಆವೃತಬೀಜ ಸಸ್ಯಗಳ ನಡುವಿನ ಒಂದು ವೈಕಾಸಿಕ ಗುಂಪನ್ನಾಗಿ ಪರಿಗಣಿಸಿರುವುದುಂಟು. ಅಂದಮಾತ್ರಕ್ಕೆ ಟೆರಿಡೋಫೈಟ, ನಗ್ನಬೀಜಸಸ್ಯಗಳು ಹಾಗೂ ಆವೃತಬೀಜಸಸ್ಯಗಳು ವಿಕಾಸದ ಒಂದೇ ನೇರ ರೇಖೆಯಲ್ಲಿದೆ. ನಗ್ನಬೀಜಸಸ್ಯಗಳು ಟೆರಿಡೋಫೈಟ ಹಾಗೂ ಆವೃತಬೀಜ ಸಸ್ಯಗಳ ನಡುವಿನ ಏಕಮೇವ ಸಂಪರ್ಕ ಸೇತು ಎಂದು ಭಾವಿಸಲಾಗದು. ವಿಕಾಸದ ರೀತಿನೀತಿಗಳು, ಈ ಗುಂಪಿಗೆ ಸಂಬಂಧಪಟ್ಟಂತೆ ಎದುರಾಗಿರುವ ಸಮಸ್ಯೆಗಳು, ಸಂತಾನೋತ್ಪಾದಕ ರಚನೆಗಳು, ಒಳರಚನೆ, ವೈಕಾಸಿಕ ಬೆಳವಣಿಗೆಗಳ ಜಟಿಲತೆಗಳು ಹಾಗೂ ಅಂತರ ಸಂಬಂಧಗಳು-ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ವರ್ಗೀಕರಣದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಸರಳತೆ, ಸ್ಪಷ್ಟತೆ ಹಾಗೂ ವಿಕಾಸದ ದೃಷ್ಟಿ-ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಂಗ್ಲರ್‍ರವರ `ಸಿಲಿಬಸ್ ಡರ್ ಫ್ಲಾಂಜೆನ್‍ಫೆಮಿಲಿನ್‍ನ 1954ನೆಯ ಇಸವಿಯ ಆವೃತ್ತಿಯಲ್ಲಿ ಪಿಲ್ಜರ್ ಮತ್ತು ಮೆಲ್ಷಾಯರ್‍ರವರು ಕೊಟ್ಟಿರುವ ಇವುಗಳ ಸಂಕ್ಷಿಪ್ತ ವರ್ಗೀಕರಣ ಈ ಕೆಳಗಿನಂತಿವೆ:

ನಗ್ನ ಬೀಜ ಸಸ್ಯಗಳು

		ವರ್ಗ1     		    ವರ್ಗ 2      	     ವರ್ಗ 3
	    ಸೈಕ್ಯಾಡಾಪ್ಸಿಡ 		   ಕೋನಿಫೆರಾಪ್ಸಿಡ 	    ನೀಟಾಪ್ಸಿಡ

	      ಗಣಗಳು: 			ಗಣಗಳು:    		ಗಣ:
		 1. ಟೆರಿಡೋಸ್ಟರ್ಮೇಲೀಸ್        1. ಕಾರ್ಡೈಟೇಲೀಸ್      1. ನೀಟೇಲೀಸ್
		 2. ಬೆನಟೈಟೇಲೀಸ್		 2. ಜಿಂಕೋಯೇಲೀಸ್
		 3. ಪೆಂಟೋಕ್ಸೈಲೇಲೀಸ್    	 3. ಕೋನಿಫರೇಲೀಸ್
		 4. ಸೈಕ್ಯಾಡೇಲೀಸ್		 4. ಟ್ಯಾಕ್ಸೇಲೀಸ್

	ಮೇಲಿನ ಗಣಗಳಲ್ಲದೆ ಟೆರಿಡೋಸ್ಪರ್ಮೀಗಳಿಗೆ ಹತ್ತಿರದ ಸಂಬಂಧಿಗಳಾದ ಕೇಟೋನಿಯೇಲೀಸ್, ಸೈಕ್ಯಾಡೇಲೀಸ್‍ಗಳಿಗೆ ಹತ್ತಿರದ ನಿಲ್ಸೋನಿಯೇಲೀಸ್ ಮತ್ತು ಕೋನಿಫೆರೇಲೀಸ್‍ಗಳ ಹತ್ತಿರದ ವೋಲ್ಟ್ಸಿಯೇಲೀಸ್- ಈ ಪಳೆಯುಳಿಕೆ ಗುಂಪುಗಳನ್ನು ಇಲ್ಲಿ ಚರ್ಚಿಸಿಲ್ಲ. ಪ್ರೋಜಿಮ್ನೋಸ್ಪರ್ಮಾಪ್ಸಿಡದ ಬಗ್ಗೆಯೂ ಇಲ್ಲಿ ಉಲ್ಲೇಖವಿಲ್ಲ.

	ಇತ್ತೀಚಿನ ಅನೇಕ ವರ್ಗೀಕರಣ ಪದ್ಧತಿಗಳಲ್ಲಿ ಸಂತಾನೋತ್ಪಾದಕರಚನೆಗಳಿಗೇ ಹೆಚ್ಚು ಪ್ರಾಮುಖ್ಯ ಕೊಡಲಾಗಿದೆ. ಇಂದಿನ ಎಲ್ಲ ನಗ್ನಬೀಜಸಸ್ಯಗಳಲ್ಲೂ ಎರಡು ಬಗೆಯ ಶಂಕುಗಳಿರುವುದನ್ನು ಕಾಣಬಹುದು. ಅವೇ ಗಂಡು ಮತ್ತು ಹೆಣ್ಣು ಶಂಕುಗಳು. ಇವನ್ನು ಒಮ್ಮೊಮ್ಮೆ, ಕೆಲವು ಸಸ್ಯಗಳಿಗೆ ಸಂಬಂಧಪಟ್ಟಂತೆ (ಉದಾ: ನೀಟೇಲೀಸ್), ಗಂಡು ಮತ್ತು ಹೆಣ್ಣು ಹೂಗಳೆಂದು ಕರೆಯುವುದುಂಟು. ಆದರೆ ಇವು ಔಚಿತ್ಯಪೂರ್ಣ ಹೆಸರುಗಳಲ್ಲ. ಅಂತೆಯೇ ಕೆಲವು ಸಸ್ಯಗಳಲ್ಲಿ ಅಂಡಕಧಾರಿ ರಚನೆಗಳು ಎಷ್ಟು ಕ್ಷೀಣಿಸಿರುತ್ತವೆಂದರೆ ಅವನ್ನು ಹೆಣ್ಣು ಶಂಕುಗಳೆಂದು ಕರೆಯಲು ಸಾಧ್ಯವಾಗುವುದೇ ಇಲ್ಲ. ಕೆಲವು ಗಣಗಳಲ್ಲಿ (ಉದಾ: ಜಿಂಕೋಯೇಲೀಸ್ ಮತ್ತು ಟ್ಯಾಕ್ಸೇಲೀಸ್) ಹೆಣ್ಣು ಶಂಕುಗಳ ಬಗ್ಗೆ ಯಾವ ಪುರಾವೆಯೂ ದೊರಕುವುದಿಲ್ಲ. ಕೆಲವು ಪ್ರಭೇದಗಳಲ್ಲಿ ಗಂಡು ಮತ್ತು ಹೆಣ್ಣು ಶಂಕುಗಳೆರಡೂ ಒಂದು ಸಸ್ಯದಲ್ಲೇ ಕಂಡುಬರುತ್ತವಾದರೆ (ಉದಾ:ಪೈನಸ್) ಮತ್ತೆ ಕೆಲವು ಪ್ರಭೇದಗಳಲ್ಲಿ ಗಂಡು ಮತ್ತು ಹೆಣ್ಣು ಶಂಕುಗಳು ಬೇರೆ ಬೇರೆ ಸಸ್ಯಗಳಿರುತ್ತವೆ. ಇಂಥವು ಏಕಲಿಂಗಿಗಳು. ಪರಾಗವನ್ನು ಉತ್ಪಾದಿಸುವ ಸಸ್ಯ ಗಂಡು, ಬೀಜಗಳನ್ನು ಉತ್ಪಾದಿಸುವುದು ಹೆಣ್ಣು.

	ನಗ್ನಬೀಜಸಸ್ಯಗಳ ಇಂದಿನ ಪ್ರಧಾನ ಗಣಗಳಲ್ಲಿ ಮುಖ್ಯವಾದವನ್ನು ಈ ಕೆಳಗೆ ವಿವರಿಸಲಾಗಿದೆ:

	1. ಸೈಕ್ಯಾಡೇಲೀಸ್: ಮೇಲಣ ಟ್ರೈಯಾಸಿಕ್‍ನಲ್ಲಿ ಕಾಣಿಸಿಕೊಂಡ ಇವುಗಳಲ್ಲಿ ಎರಡು ಕುಟುಂಬಗಳಿವೆ: ನಿಲ್ಸೋನಿಯೇಸೀ (ಪಳೆಯುಳಿಕೆ ಕುಟುಂಬ) ಮತ್ತು ಸೈಕ್ಯಾಡೇಸೀ. ಸುಮಾರು 85 ಪ್ರಭೇದಗಳಿರುವ ಈ ಗಣದಲ್ಲಿ ಜೀವಂತ ಪ್ರಭೇದಗಳೇ 65 ಇವೆ. ಮುಖ್ಯ ಜೀವಂತಜಾತಿಗಳು 9. ತಮ್ಮ ರೂಪುರಚನೆ ಹಾಗೂ ಜೀವನಚಕ್ರದಲ್ಲಿ ಇವು ಅನೇಕ ಪ್ರಾಚೀನ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ.

	ಸೈಕ್ಯಾಡೇಲೀಸ್‍ಗಳ ಕೆಲವು ಸಾಮಾನ್ಯ ಗುಣಲಕ್ಷಣಗಳು: 1. ಕಾಂಡ ಒರಟು ಬಗೆಯವು. ಇದು ಸಾಮಾನ್ಯವಾಗಿ ಕವಲೊಡೆಯುವುದಿಲ್ಲ. ಆದರೆ ಕವಲೊಡೆದಿರುವುದು ಅಪರೂಪವೇನಲ್ಲ. 2. ಬೆಂಡು (ಪಿತ್) ಮತ್ತು ಕಾರ್ಟೆಕ್ಸ್ ಭಾಗಗಳಲ್ಲಿ ಲೋಳೆ (ಮ್ಯೂಸಿಲೇಜ್) ನಾಳಗಳಿವೆ.

ಮಾನೋಕ್ಸೈಲಿಕ್ ಗುಣವೇ ನಿಯಮ (ದ್ವಿತೀಯಕ ದಾರು ಕಡಿಮೆ ಪ್ರಮಾಣದಲ್ಲಿದ್ದು ಮೃದುವಾಗಿರುವುದು ಮತ್ತು ದೊಡ್ಡ ಪರೆಂಕಿಮಗಳಿಂದ ಕೂಡಿರುವುದು)

ಕೆಲವು ಜಾತಿಗಳಲ್ಲಿ ಸಹ ಅಕ್ಷೀಯ ವಾಹಕ ಉರುಳೆಗಳಿವೆ.
ಸಸ್ಯಗಳು ಏಕಲಿಂಗಿಗಳು. ಸಂತಾನೋತ್ಪಾದಕ ಅಂಗಗಳು ಶಂಕುಗಳಲ್ಲಿ (ಹೆಣ್ಣುಸೈಕ್ಯಾಸ್ ಸಸ್ಯವನ್ನು ಬಿಟ್ಟು) ಸಮಾವೇಶಗೊಂಡಿವೆ.

ಶಂಕುಗಳು ಕಾಂಡಗಳ ತುದಿಯಲ್ಲಿ ಇಲ್ಲವೇ ಕಂಕುಳಲ್ಲಿ ಸ್ಥಿತವಾಗಿವೆ.
ಬೃಹದ್ಬೀಜಕಣಪತ್ರಗಳಿಗೆ ಗೊಡ್ಡು ತುದಿಗಳಿವೆ. ಅಂಡಕಗಳ ಸಂಖ್ಯೆ 2-8. 
ಬೀಜಗಳು ದೊಡ್ಡವು.

ಗಂಡು ಲಿಂಗಾಣುಗಳಲ್ಲಿ ವಿಶಿಷ್ಟ ಸುರುಳಿಗಳಲ್ಲಿ ಜೋಡಣೆಗೊಂಡಿರುವ ಹಾಗೂ ಚಲನಶಕ್ತಿಗೆ ಕಾರಣವಾದ ಕಶಾಂಗಗಳಿವೆ.

	ಸೈಕ್ಯಾಡೇಸೀ ಕುಟುಂಬದ ಮುಖ್ಯ ಸಸ್ಯ ಜಾತಿಗಳು.1. ಸೈಕ್ಯಾಸ್: 15 ಪ್ರಭೇದಗಳನ್ನು ಒಳಗೊಂಡಿವೆ. ಜಪಾನಿನಿಂದ ಕ್ವೀನ್ಸ್‍ಲೆಂಡ್‍ವರೆಗೂ ಇವುಗಳ ವ್ಯಾಪ್ತಿಯುಂಟು. ಭಾರತ ಮತ್ತು ಮಡಗಾಸ್ಕರಗಳಲ್ಲೂ ಕೆಲವು ಪ್ರಭೇದಗಳುಂಟು. ಸೈಕ್ಯಾಸ್ ಸರ್ಸಿನ್ಯಾಲಿಸ್, ಸೈ ಪೆಕ್ಟಿನೇಟ, ಸೈ. ಬೆಡ್ಡೋಮಿ, ಸೈ. ರಂಫಿ ಪ್ರಭೇದಗಳು ಭಾರತದಲ್ಲಿರುವ ಪ್ರಭೇದಗಳು.

	2. ಒವೀನಿಯ ಮತ್ತು 3. ಮ್ಯಾಕ್ರೋeóÉಮೀಯ: ಇವೆರಡೂ ಕ್ವೀನ್ವ್‍ಲೆಂಡ್ ಮತ್ತು ಈಶಾನ್ಯ ಆಸ್ಟ್ರೇಲಿಯಾಗಳಿಗೆ ಸೀಮಿತಗೊಂಡಿವೆ. ಮ್ಯಾಕ್ರೋಜೇಮೀಯ ಡೆನಿಸೋನಿಯೈ ಎಂಬುದರ ಹೆಣ್ಣು ಶಂಕುಗಳು ಒಂದು ಮೀಟರ್ ಉದ್ದವಿದ್ದು 85 ಪೌಂಡು ತೂಗುತ್ತವೆ.

ಎನ್ಸೆಫಲಾರ್ಟಸ್: 14 ಪ್ರಭೇದಗಳನ್ನು ಒಳಗೊಂಡಿರುವ ಈ ಸಸ್ಯಜಾತಿ ದಕ್ಷಿಣ ಆಫ್ರಿಕದ ಅನೇಕ ಪ್ರದೇಶಗಳಲ್ಲಿ ಕಾಣಬರುತ್ತವೆ.
ಸ್ಟಾಂಜೀರಿಯ: ಒಂದು ಪ್ರಭೇದವುಳ್ಳದ್ದು. ಆವಾಸಸ್ಥಾನ ನಟಾಲ್.
eóÉೀಮೀಯ: ಇದರಲ್ಲಿ 30 ಪ್ರಭೇದಗಳಿವೆ. ಫ್ಲಾರಿಡ, ಡೆಲಿಗಳಲ್ಲಿ ಕಾಣದೊರೆಯುವುದು
ಸೆರಾಡೋeóÉೀಮೀಯ: 2 ಪ್ರಭೇದಗಳ ಈ ಜಾತಿ ಮೆಕ್ವಿಕೋದಲ್ಲಿದೆ.
ಡಯೂನ್: ಮೂರು ಪ್ರಭೇದಗಳನ್ನು ಒಳಗೊಂಡಿದೆ. ಮೆಕ್ಸಿಕೋ ನಿವಾಸಿ.
ಮೈಕ್ರೋಸೈಕ್ಯಾಸ್: ಒಂದೇ ಪ್ರಭೇದವನ್ನುಳ್ಳ ಜಾತಿ. ಕ್ಯೂಬದಲ್ಲಿ ಮಾತ್ರ ಕಂಡುಬರುತ್ತದೆ.

	ಈ ಕುಟುಂಬದ ಅನೇಕ ಸಸ್ಯಗಳನ್ನು ಅಲಂಕಾರಕ್ಕಾಗಿ ಬೆಳೆಸುವುದುಂಟು. (ಉದಾ: ಸೈಕ್ಯಾಸ್, ಎನ್ಸೆಫಲಾರ್ಟಸ್, ಜೇಮೀಯ ಮತ್ತಿತರ ಕೆಲವು ಜಾತಿ ಸಸ್ಯಗಳ ಕಾಂಡಗಳಲ್ಲಿ ಪಿಷ್ಟಪದಾರ್ಥ ಹೇರಳವಾಗಿರುವುದರಿಂದ ಒಂದು ಬಗೆಯ ಸೀಮೆ ಅಕ್ಕಿಯನ್ನು ಅವುಗಳಿಂದ ತಯಾರಿಸಿ ಬಳಸುವುದಿದೆ. ಬೀಜಗಳನ್ನು ಮೇವನ್ನಾಗಿ ಬಳಸಲಾಗುತ್ತದೆ.
2. ಜಿಂಕೋಯೇಲೀಸ್: ಕುಟುಂಬಗಳು ಎರಡು: 1. ಟೈಕೊಪಿಟಿಯೇಸೀ (ಉದಾ: ಟೈಕೋಪಿಟಸ್);

	2. ಜಿಂಕೋಯೇಸೀ (ಉದಾ: ಸ್ಫೀನೋಬೇರ, ಜಿಂಕಾಯ್ಟಿಸ್, ಬೇರ, ಅಕ್ರ್ಟೊಚೇರ, ವಿಂಡ್‍ವಾರ್ಡಿಯ, ಎರಿಡ್ಮೊಫಿಲಮ್ ಮತ್ತು ಜಿಂಕೊ).

	ಈ ಗಣ ಸುಮಾರು 16 ಜಾತಿಗಳನ್ನೂ ಅನೇಕ ಪ್ರಭೇದಗಳನ್ನೂ ಒಳಗೊಂಡಿದೆ. ಇವು ಒಮ್ಮೆ ಪ್ರಪಂಚಾದ್ಯಂತ ವ್ಯಾಪಿಸಿದ್ದುವು. ಆದರೆ ಇವುಗಳ ಪೈಕಿ ಇಂದು ಜೀವಿಸಿರುವ ಒಂದೇ ಪ್ರಭೇದವೆಂದರೆ ಜಿಂಕೋ ಬೈಲೋಬ. ಜಿಂಕೋಯೇಲೀಸ್ ಗಣದ ಸಸ್ಯಗಳು ಬಹುಶಃ ಡಿವೋನಿಯನ್‍ನಲ್ಲಿ ವಿಕಸಿಸಿ ಟ್ರೈಯಾಸಿಕ್‍ನಲ್ಲಿ ಹೆಚ್ಚಾಗಿ ವಿಸ್ತರಿಸಿದುವು. ಇವುಗಳ ಅತಿಹೆಚ್ಚಿನ ಬೆಳವಣಿಗೆ ವಿಕಸನಗಳು ಜುರಾಸಿಕ್ನಲ್ಲಾದುವು. ಅನಂತರದ ಕಾಲದಲ್ಲಿ ಇವು ಸ್ವಲ್ಪವಾಗಿ ನಶಿಸಿಹೋಗಲು ಪ್ರಾರಂಭಿಸಿದವು. ಇಂದು ಉಳಿದಿರುವ ಜಿಂದೋ ಬೈಲೋಬ ಕೂಡ ಇವುಗಳ ಹಾದಿಯನ್ನೇ ಹಿಡಿಯುತ್ತಿತ್ತೋ ಏನೋ. ಆದರೆ ಹಲವಾರು ಶತಮಾನಗಳಿಂದಲೂ ಇದಕ್ಕೆ ಮಾನರಕ್ಷಣೆ ದೊರೆತಿರುವುದರಿಂದ ಬಹುಶಃ ಹೀಗಾಗಲಿಲ್ಲ. ಚೀನ ಮತ್ತು ಜಪಾನ್‍ಗಳ ಬೌದ್ಧ  ದೇವಾಲಯಗಳು ಹಾಗೂ ವಿಹಾರಗಳಲ್ಲಿ ಇದನ್ನೊಂದು ಪವಿತ್ರ ವೃಕ್ಷವೆಂದು ಪರಿಗಣಿಸಿ ಬೆಳೆಸಲಾಗುತ್ತದೆ. ಭಾರತದಲ್ಲಿ ಕೂಡ ಡೆಹ್ರಾಡೂನ್, ಅಮೃತಸರ,  ಮುಂತಾದ ಪ್ರದೇಶಗಳಲ್ಲಿ ಈ ಮರಗಳನ್ನು ಉದ್ಯಾನವನಗಳಲ್ಲಿ ಕಾಣಬಹುದು. 

	ಗಿಂಕೋ ಎಂಬ ಹೆಸರನ್ನು ಜಿಂಕ್ಯೊ ಎಂಬ ಚೀನೀ ಪದದಿಂದ ಪಡೆಯಲಾಗಿದೆ. ಹಿಂದೆ ಈ ಪ್ರಭೇದಕ್ಕೆ ಸ್ಯಾಲಿಸ್‍ಬರಿಯ ಅಡಿಯಾಂಟಿಫೋಲಿಯ ಎಂಬ ಹೆಸರಿತ್ತು. ಈ ಸಸ್ಯಕ್ಕೆ 200,000,000 ವರ್ಷಗಳಿಗೂ ಹಿಂದಿನ ಇತಿಹಾಸವಿದೆ ಎಂದು ಪ್ರಾಚೀನ ಸಸ್ಯವಿಜ್ಞಾನಿಗಳ ಅಭಿಪ್ರಾಯ. ಸ್ಟೂವರ್ಡ್‍ರವರ ಅಭಿಪ್ರಾಯದ ಪ್ರಕಾರ ಇಷ್ಟೊಂದು ಪ್ರಾಚೀನ ಸಸ್ಯ ಭೂಮಿಯ ಮೇಲೆ ಬಹುಶಃ ಇನ್ನೊಂದಿಲ್ಲ. ಅವರ ಮಾತುಗಳಲ್ಲೇ ಹೇಳುವುದಾದರೆ, ಗಿಂಕೋ ಬೈಲೋಬ ಬದಲಾವಣೆಯಾಗದಿರುವುದರ ಸಂಕೇತ, ಮಾನವನ ಬುದ್ಧಿಗೆ ಸಿಲುಕಲಾರದಷ್ಟು ಪುರಾತನ ಕಾಲದ್ದು, ಅಳೆಯಲಾಗದಷ್ಟು ಹಿಂದಿನ ಕಾಲದ ಅನೇಕ ರಹಸ್ಯಗಳನ್ನು ಇಟ್ಟುಕೊಂಡಿರುವ ಮರ ಇದು. ಮೀಸೋಜೋಯಿಕ್ ಕಾಲದಲ್ಲಿ ಪ್ರಪಂಚದ ಎಲ್ಲೆಡೆಗಳಲ್ಲಿಯೂ ಕಂಡುಬರುತ್ತಿದ್ದ ಈ ಸಸ್ಯ ಇಂದು ಮಾನವರಕ್ಷಣೆಯಲ್ಲಿ ಮಾತ್ರ ಬೆಳೆಯುತ್ತಿದೆ. ಲೀ ಎಂಬಾತ ಚೀನದಲ್ಲಿ ಈ ಮರದ ಕಾಡುಗಳೇ ಇವೆ ಎಂದು ಹೇಳಿದ್ದಾನೆ. ಆದರೆ ಈ ಹೇಳಿಕೆಗೆ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ. ಅಷ್ಟೊಂದು ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಒಂದೇ ರೀತಿಯಲ್ಲಿ ಕಂಡುಬರುವ ಜಿಂಕೋ ಸಸ್ಯವನ್ನು ಅನೇಕ ಸಸ್ಯವಿಜ್ಞಾನಿಗಳು ಜೀವಂತ ಪಳೆಯುಳಿಕೆ ಎಂದು ಕರೆಯುತ್ತಾರೆ.

	ಗಿಂಕೋ ಬೈಲೋಬ ಎಳೆಯ ವಯಸ್ಸಿನಲ್ಲಿ ಶಂಕುವೃಕ್ಷಗಳ ಸ್ವರೂಪವನ್ನೇ ಪ್ರದರ್ಶಿಸುವುದಾದರೂ ವಯಸ್ಸಾದಂತೆಲ್ಲ ಕವಲೊಡೆಯುವಿಕೆ ಅನಿಶ್ಚಿತ ಮಾರ್ಗವನ್ನು ಹಿಡಿಯುವುದರಿಂದ ಮರದ ಕಿರೀಟಭಾಗ ಬಹು ವಿಶಾಲವಾಗಿ ಹರಡಿಕೊಳ್ಳುತ್ತದೆ. ಮರ ಸುಮಾರು 30 ಮೀ.ಗಳಷ್ಟು ಎತ್ತರಕ್ಕೆ ಬೆಳೆದು ಒಂದು ಬೃಹತ್ ವೃಕ್ಷವಾಗುವುದುಂಟು. ಸುತ್ತಳತೆ ಒಂದು ಮೀಟರಿಗಿಂತಲೂ ಹೆಚ್ಚಾಗಿರುತ್ತದೆ. ಮರದ ಕವಲುಗಳು ಎರಡು ರೀತಿಯವು: 1. ಅನಿಯತ ಬೆಳವಣಿಗೆಯ ಉದ್ದನೆಯ ಕವಲುಗಳು, 2. ಸೀಮಿತ ಬೆಳವಣಿಗೆಯ ಗಿಡ್ಡ ಕವಲುಗಳು. ಗಿಡ್ಡ ಕಾಂಡಗಳನ್ನು ಬ್ರಾಕಿಪ್ಲಾಸ್ಟ್‍ಗಳು ಅಥವಾ ಲೀಫ ಸ್ಟರ್‍ಗಳು ಎಂದು ಕರೆಯಲಾಗುತ್ತದೆ.

	ಗಿಂಕೋವಿನ ಎಲೆಗಳಲ್ಲಿ ಅಡಿಯಾಂಟಮ್ (ಒಂದು ಬಗೆಯ ಜರೀಗಿಡ) ಎಲೆಗಳಲ್ಲಿರುವಂಥ ನಾಳವಿನ್ಯಾಸವಿದೆ. ಇದರಿಂದ ಎಲೆ ಸುಂದರವಾಗಿ ಕಾಣುತ್ತದೆ.

	ಗಿಂಕೋ ಒಂದು ಏಕಲಿಂಗ ಸಸ್ಯ. ಲಿಂಗ ನಿರ್ಧಾರ ಲಿಂಗ ಕ್ರೋಮೊಸೋಮುಗಳಿಂದ ಆಗುತ್ತದೆ. ಹೆಣ್ಣುಸಸ್ಯ ಘಿಘಿ, ಗಂಡು ಘಿಙ ಆಗಿರುವುದರಿಂದ ಇಲ್ಲಿ ಲಿಂಗ ನಿರ್ಧರಣಾ ವಿನ್ಯಾಸ ಘಿಘಿ ಮತ್ತು ಘಿಙ ಮಾದರಿಯದು (ಲೀ. 1954). ಅಂಡಕಗಳು ಮತ್ತು ಕ್ಯಾಟ್ಕಿನ್‍ನಂಥ ಗಂಡು ಅಂಗಗಳು ಗಿಡ್ಡ ಕವಲುಗಳಲ್ಲಿನ ಎಲೆಗಳ ಕಂಕುಳಲ್ಲಿ ಜೋಡಣೆಗೊಂಡಿವೆ. ಅಂಡಕಗಳಿಗೆ ತೊಟ್ಟಿಲ್ಲ. ಆದರೆ ಇವುಗಳ ತಳಭಾಗದ ಸುತ್ತಲೂ ಒಂದು ರಸಭರಿತ ಭಾಗ-ಕಾಲರ್-ಉಂಟು. ಗಂಡು ಲಿಂಗಾಣುಗಳಿಗೆ ಸೈಕ್ಯಾಸ್ ಸಸ್ಯದವುಗಳಿಗೆ ಇರುವಂತೆ ಚಲನ ಸಾಮಥ್ರ್ಯ ಇದೆ. ಆದರೆ ಗಿಂಕೋವಿನ ಗಂಡು ಲಿಂಗಾಣುಗಳಲ್ಲಿ ಕಶಾಂಗಗಳೂ ಅಗ್ರಭಾಗಕ್ಕೆ ಮಾತ್ರ ಸೀಮಿತಗೊಂಡಿವೆ ಮತ್ತು ಲಿಂಗಾಣುಗಳು ಸ್ವಲ್ಪ ಹೆಚ್ಚು ಉದ್ದವಾಗಿವೆ. ಗಿಂಕೋ ಸಸ್ಯದ ಒಂದು ವಿಚಿತ್ರವನ್ನು ಫೇವ್ರ್-ಡಕಾರ್ಟ್ ಬೆಳಕಿಗೆ ತಂದಿದ್ದಾರೆ; ಗರ್ಭಾಂಕುರತೆಗೆ ಆರು ದಿನಗಳ ಮುಂಚೆಯೇ ಅಂಡಕವನ್ನು ತಾಯಿಸಸ್ಯದಿಂದ ಬೇರ್ಪಡಿಸಿದರೂ ಕೂಡ ಅಂಡಕದ ಮುಂದಿನ ಬೆಳವಣಿಗೆ, ಗರ್ಭಾಂಕುರತೆ ಹಾಗೂ ಭ್ರೂಣದ ಬೆಳವಣಿಗೆಗಳು ಮುಂದುವರಿಯಬಲ್ಲವು. ಬಲಿತ ಭ್ರೂಣದಲ್ಲಿ ಎರಡು ಬೀಜಪತ್ರಗಳು, ಪ್ರಥಮ ಮೂಲ ಹಾಗೂ 5 ಎಲೆಗಳ ಕುರುಹುಗಳಿರುವ ಪ್ಲೂಮ್ಯೂಲಗಳುಂಟು. ಬಲಿತ ಬೀಜಗಳು ದಪ್ಪವಾಗಿದ್ದು, ಸುಮಾರು 2.5 ಸೆಂ.ಮೀ.ಉದ್ದ ಇದೆ.

	ಗಿಂಕೋಯೇಲೀಸ್ ಗುಂಪಿನ ಸಸ್ಯಗಳ ಸಂಬಂಧಗಳ ಬಗ್ಗೆ ಬಹು ಹಿಂದಿನಿಂದಲೂ ವಾದವಿವಾದಗಳಿವೆ. ಕೂಲ್ಟರ್ ಮತ್ತು ಚೇಂಬರ್ಲಿನ್ ಎಂಬ ವಿಜ್ಞಾನಿಗಳ ಪ್ರಕಾರ ಗಿಂಕೋಯೇಲೀಸ್ ಗುಂಪಿನ ಸಸ್ಯಗಳ ಕಾರ್ಡೈಟೇಲೀಸ್ ಗಣದ ಸಸ್ಯಗಳ ಸಂಬಂಧಿಗಳು. ಇವು ಕೋನಿಫರ್‍ಗಳೊಂದಿಗೆ ಈ ಕೆಳಗಿನಂತೆ ಉಗಮಗೊಂಡಿವೆ.

		ಗಿಂಕೋಯೇಲೀಸ್  ಕೋನಿಫರೇಲೀಸ್
			↑              ↑

			ಕಾರ್ಡೈಟೇಲೀಸ್
ಆರ್ನಾಲ್ಡ್ ಈ ಅಭಿಪ್ರಾಯವನ್ನು ವಿರೋಧಿಸಿ ಇವು ಟೆರಿಡೋಸ್ಪರ್ಮ್‍ಗಳ ಸಂಬಂಧಿಗಳು ಎಂದಿದ್ದಾನೆ. ಇವು ಕೋನಿಫರ್‍ಗಳೊಂದಿಗೆ ಸಂಬಂಧ ಪಡೆದಿವೆ ಎಂಬುದನ್ನು ಫ್ಲೋರಿನ್ ಎಂಬಾತನ ಸಂಶೋಧನೆಗಳು ತೋರಿಸಿಕೊಟ್ಟಿವೆ. ಸಾಕಷ್ಟು ವೈಶಿಷ್ಟ್ಯಗಳಿರುವ ಗಿಂಕೋಯೇಲೀಸ್ ಸಸ್ಯಗಳನ್ನು ಒಂದು ಸ್ವತಂತ್ರ ವರ್ಗವನ್ನಾಗಿ ಪರಿಗಣಿಸಬೇಕೆಂಬ ವಾದವೂ ಉಂಟು.

	III ಕೋನಿಫರೇಲೀಸ್: ಈ ಗಣದಲ್ಲಿ ಲೆಬಾನಿಕಿಯೇಸೀ, ವೋಲ್ಟ್ಲಿಯೇಸೀ, ಪ್ಯಾಲಿಸಿಯೇಸೀ, ಪೈನೇಸೀ, ಟ್ಸಾಕ್ಸೋಡಿಯೇಸೀ, ಕ್ಯುಪ್ರಸೆಸೀ, ಪೋಡೋಕಾರ್ಪೇಸೀ, ಸೆಫಲೋಟ್ಯಾಕ್ಸೇಸೀ, ಅರಕೇರಿಯೇಸೀ ಎಂಬ 9 ಕುಟುಂಬಗಳಿವೆ. ಇದರಲ್ಲಿ ಕೊನೆಯ 6 ಕುಟುಂಬಗಳು ಆಧುನಿಕ ಶಂಕುವೃಕ್ಷಗಳೆನಿಸಿವೆ. ಇವುಗಳಲ್ಲಿ 52 ಜಾತಿಗಳು ಹಾಗೂ 566 ಪ್ರಭೇದಗಳುಂಟು. ಉಳಿದ ಮೂರು ಕುಟುಂಬಗಳ ಸಸ್ಯಗಳು ಗತವಂಶಿಗಳು.

	ಕೋನಿಫೆರೇಲೀಸ್ ಗಣದ ಸಸ್ಯಗಳು ಹಿಂದೆ ವಿವರಿಸಿದ ಸಸ್ಯವರ್ಗಗಳಂತಲ್ಲ. ಟೆರಿಡೋಸ್ಪರ್ಮೀಗಳಿಂದ ಜಿಂಕೋಯೇಲೀಸ್‍ವರೆಗಿನ ಸಸ್ಯಗಳು ಒಂದಾನೊಂದು ಕಾಲದಲ್ಲಿ ಉಗಮಗೊಂಡವು; ಒಂದು ಕಾಲದಲ್ಲಿ ಪ್ರಧಾನ ಸಸ್ಯವರ್ಗವಾಗಿ ವಿಸ್ತಾರಯುತ ಪ್ರದೇಶಗಳಲ್ಲಿ ಹರಡಿಕೊಂಡವು ಮತ್ತು ಕೆಲವು ಬಗೆಯ ತಾಳಕಲ್ಪಗಳು ಮತ್ತು ಗಿಂಕೋಗಳನ್ನು ಬಿಟ್ಟು ಮಿಕ್ಕೆಲ್ಲವೂ ಅಳಿದುಹೋದುವು. ಕೋನಿಫೆರೇಲೀಸ್ ಗಣದ ಸಸ್ಯಗಳಾದರೋ ಅವು ಉಗಮವಾದ ಕಾಲದಿಂದ ಇಂದಿನವರೆಗೂ ಪ್ರಪಂಚದ ಅರಣ್ಯಗಳ ಪ್ರಧಾನ ಸಸ್ಯವರ್ಗಗಳ ಪೈಕಿ ಒಂದಾಗಿ ಉಳಿದುಕೊಂಡಿವೆ. ಇಂದು ಕೂಡ ಬಹು ವಿಸ್ತಾರವಾದ ಪ್ರದೇಶಗಳಲ್ಲಿ ಶಂಕುವೃಕ್ಷಗಳ ಕಾಡುಗಳನ್ನು ಕಾಣಬಹುದು. ಶುದ್ಧಬಗೆ ಹಾಗೂ ಮಿಶ್ರಬಗೆಗಳ ಕಾಡುಗಳೆರಡರಲ್ಲೂ ಇವು ಉಂಟು. ಮಿಶ್ರಬಗೆಯ ಕಾಡುಗಳಲ್ಲಿ ಉಳಿದ ಮರಗಳ ಸಾಮಾನ್ಯ ಮಟ್ಟಕ್ಕಿಂತ ಅತಿ ಎತ್ತರದ ಇವು ಹೊರಚಾಚಿಕೊಂಡಿರುತ್ತದೆ. ಪ್ರಪಂಚದ ಅತಿ ಎತ್ತರದ ಗಗನಚುಂಬಿ ವೃಕ್ಷಗಳು ಶಂಕುವೃಕ್ಷಗಳೇ. ಉದಾಹರಣೆಗೆ ಸಿಕೋಯ ಸೆಂಪರ್ವಿರೆನ್ಸ್ 112 ಮೀಟರ್‍ಗಳಷ್ಟು ಎತ್ತರಕ್ಕೆ ಬೆಳೆಯುವುದು. ಇವು ದೀರ್ಘಾಯುಗಳೂ ಹೌದು. ಬಿಲ್ಲಿಂಗ್ಸ್ ಮತ್ತು ಥಾಂಪ್ಸನ್‍ರವರ ವರದಿಯ ಪ್ರಕಾರ, ಕ್ಯಾಲಿಫೋರ್ನಿಯದ ಹತ್ತಿರದ ಬೆಟ್ಟದಲ್ಲಿ ಬೆಳೆಯುತ್ತಿರುವ ಪೈನಸ್ ಅರಿಸ್ಟೇಟಕ್ಕೆ 4,000 ವರ್ಷಗಳಷ್ಟು ವಯಸ್ಸಾಗಿದೆ.

	ಈ ಗುಂಪಿನ ಕೆಲವು ಸಾಮಾನ್ಯ ಗುಣಲಕ್ಷಣಗಳು: 1. ಇವು ಕವಲೊಡೆಯುವ ಉದ್ದನೆಯ ಮತ್ತು ಗಿಡ್ಡ ಕವಲುಗಳುಳ್ಳ ಸಸ್ಯಗಳು.

	2. ದ್ವಿತೀಯಕ ಕ್ಸೈಲಮ್ ಪಿಕ್ನೋಕ್ಸೈಲಿಕ್ ಮಾದರಿಯದು. ಇದರಲ್ಲಿನ ಟ್ರೆಕೀಡ್‍ಗಳ ಆರೀಯ ಭಿತ್ತಿಗಳ ಮೇಲೆ ದೊಡ್ಡ ಏಕಶ್ರೇಣೀಯ (ಅಪರೂಪಕ್ಕೆ ಬಹುಶ್ರೇಣೀಯ) ಕುಳಿಗಳು ಉಂಟು.

	3. ಕ್ಸೈಲಮ್ ರೇಗಳು ಸಣ್ಣವು.

	4. ಎಲೆಗಳು ಸುರುಳಿ ಸುರುಳಿಯಾಗಿ ಜೋಡಣೆಗೊಂಡಿವೆ ಇಲ್ಲವೆ ಅಭಿಮುಖವಾಗಿವೆ. ಅಪರೂಪಕ್ಕೆ ಸುತ್ತುಗಳಲ್ಲಿರಬಹುದು. ಇವು ಸೂಜಿಯಂಥವು ಇಲ್ಲವೆ ಹುರುಪೆಗಳಂಥವು. ಅಪರೂಪಕ್ಕೆ ಅಗಲವಾಗಿರಬಹುದು.

5. ಸಂತಾನೋತ್ಪಾದಕ ಅಂಗಗಳು ಏಕಲಿಂಗೀಯ ಶಂಕುಗಳು.

6. ಹೆಣ್ಣು ಶಂಕುಗಳು ಮೂಲತಃ ಸಂಯುಕ್ತ ರೀತಿಯವು. ಪ್ರಧಾನ ಅಕ್ಷದ ಮೇಲೆ ಕೆಲವು ಅಥವಾ ಅನೇಕ ಬ್ರಾಕ್ಟ್ ಹುರುಪೆಗಳಿವೆ. ಇವುಗಳಲ್ಲಿ ಸಂಯೋಗಗೊಂಡಿರುವ ಅಥವಾ ಹಾಗಿಲ್ಲದಿರುವ ಒಂದು ಅಂಡಧರಪಟ್ಟೆ (ಫಲವಂತ ಹಾಗೂ ಗೊಡ್ಡು ಉಪಾಂಗಗಳಿರುವ ದ್ವಿತೀಯಕ ಫಲವಂತ ಅಕ್ಷ) ಉಂಟು. ಪ್ರತಿ ಅಂಡಕಧರಪಟ್ಟೆಯಲ್ಲೂ ಎರಡರಿಂದ ಅನೇಕ ಅಂಡಕಗಳಿರಬಹುದು. ಅಪರೂಪಕ್ಕೆ ಒಂದೇ ಒಂದು ಅಂಡಕವಿರುವುದೂ ಉಂಟು.

7. ಗಂಡುಶಂಕುಗಳು ಸರಳರೀತಿಯವು. ಸಾಮಾನ್ಯವಾಗಿ ಎರಡರಿಂದ ಅನೇಕ ಪಟ್ಟೆಯಂಥ ಸೂಕ್ಷ್ಮಬೀಜ ಕಣಪತ್ರಗಳನ್ನು ಇವುಗಳಲ್ಲಿ ಗಮನಿಸಬಹುದು. ಪರಾಗ ಕೋಶಗಳು ಬಿಡಿಯಾಗಿರಬಹುದು ಇಲ್ಲವೇ ಕೂಡಿಕೊಂಡಿರಬಹುದು.

8. ಭ್ರೂಣದಲ್ಲಿ ಎರಡರಿಂದ ಅನೇಕ ಬೀಜಪತ್ರಗಳಿವೆ.

	Iv ಟ್ಯಾಕ್ಸೇಲೀಸ್: ಇದರಲ್ಲಿ ಒಂದೇ ಒಂದು ಕುಟುಂಬ ಉಂಟು: ಟ್ಯಾಕ್ಸೇಸೀ (ಉದಾ: ಟ್ಯಾಕ್ಸಸ್, ಆಸ್ಟ್ರೋಟ್ಯಾಕ್ಸಸ್, ಸೂಡೋಟ್ಯಾಕ್ಸಸ್, ಟೋರಿಯ ಮತ್ತು ಅಮೀನೋಟ್ಯಾಕ್ಸಸ್)

	ಕುಟುಂಬದ ಸಾಮಾನ್ಯ ಗುಣಲಕ್ಷಣಗಳು: 1. ಈ ಕುಟುಂಬದ ಸಸ್ಯಗಳು ಹೆಚ್ಚಾಗಿ ಕವಲೊಡೆದಿರುವ ನಿತ್ಯಹರಿದ್ವರ್ಣ ಪೊದೆಗಳು ಇಲ್ಲವೇ ಸಣ್ಣಮರಗಳು.
	2. ಎಲೆಗಳು ಉದ್ದವಾಗಿವೆ; ಇವುಗಳ ಜೋಡಣೆ ಸುರುಳಿಮಾದರಿಯದು.
	3. ದ್ವಿತೀಯಕ ಕ್ಸೈಲಮ್ ಪಿಕ್ನೋಕ್ಸೈಲಿಕ್ ಮಾದರಿಯದು. ಟ್ರೇಕೀಡ್‍ಗಳಲ್ಲಿ ತೃತೀಯಕ ಸುರುಳಿಗಳುಂಟು.
	4. ಕ್ಸೈಲಮಿನಲ್ಲಾಗಲೀ ಎಲೆಗಳಲ್ಲಾಗಲೀ ರೆಸಿನ್‍ನಾಳಗಳಿಲ್ಲ.
	5. ಅಂಡಕಗಳು ಒಂಟಿಯಾಗಿ ಗಿಡ್ಡ ಕವಲುಗಳ ತುದಿಗಳಲ್ಲಿ ಬ್ರಾಕ್ಟ್‍ಗಳೊಂದಿಗೆ ಉತ್ಪತ್ತಿಯಾಗುತ್ತದೆ. ಇವಕ್ಕೆ ಏರಿಲ್ ಉಂಟು.
	6. ಸೂಕ್ಷ್ಮಸ್ಪೊರಾಂಜಿಯೋಪೋರ್‍ಗಳು ಸಣ್ಣ ಶಂಕುಗಳಲ್ಲಿರುವುವು. ಆಸ್ಟ್ರೊಟ್ಯಾಕ್ಸಸ್‍ನಲ್ಲಿ ಬ್ರಾಕ್ಟ್‍ಗಳುಂಟು. ಇವು ಪಟ್ಟೆಯಂತಿರಬಹುದು. ಇಲ್ಲವೆ ಚಮಚದ ಆಕಾರದವಾಗಿರಬಹುದು.
	7. ಭ್ರೂಣದಲ್ಲಿ ಎರಡು ಬೀಜಪತ್ರಗಳಿವೆ.

	ಆರ್ಥಿಕ ಪ್ರಾಮುಖ್ಯ: ಟ್ಯಾಕ್ಸಸ್ ಬಕೇಟ ಮತ್ತು ಟ್ಯಾಕ್ಸಸ್ ವ್ಯಾಲಿಚಿಯಾನಗಳು ಭಾರತದ ನೀಫ, ಅಸ್ಸಾಮ್, ಮಣಿಪುರ, ಖಾಸಿ, ಜೈಂತಿಯ ಪ್ರದೇಶಗಳಲ್ಲಿ ಮತ್ತು ಸಿಮ್ಲಗಳಲ್ಲಿ ಬೆಳೆಯುತ್ತವೆ. ಇವುಗಳ ತೊಗಟೆಯಿಂದ ಒಂದು ಬಗೆಯ ಟೀ ತಯಾರಿಸುವುದುಂಟು. ಆದಿವಾಸಿಗಳು ಇವುಗಳ ಮರದಿಂದ ಬಿಲ್ಲುಗಳನ್ನು ತಯಾರಿಸುತ್ತಾರೆ. ಆಲಂಕಾರಿಕ ಪಟ್ಟಿಗೆಗಳನ್ನು, ಬಂದೂಕದ ಪುಡಿಗೆ ಬೇಕಾಗುವ ಇದ್ದಿಲನ್ನು ತಯಾರಿಸುವುದಿದೆ. ಅಲಂಕಾರಿಕ ಸಸ್ಯಗಳನ್ನಾಗಿಯೂ ಇವನ್ನು ಉದ್ಯಾನವನಗಳಲ್ಲಿ ಬೆಳೆಸಲಾಗುತ್ತದೆ.

	V ನೀಟೇಲೀಸ್: ಇದರಲ್ಲಿ ನೀಟೇಸೀ, ಎಫಿಡ್ರೇಸೀ ಮತ್ತು ವೆಲ್ವಿಶ್ಚಿಯೇಸೀ ಎಂಬ ಮೂರು ಕುಟುಂಬಗಳುಂಟು.

	ನಗ್ನಬೀಜಸಸ್ಯಗಳಲ್ಲೆಲ್ಲ ಹೆಚ್ಚು ಚರ್ಚಾಸ್ಪದವಾಗಿರುವ ಸಸ್ಯಗಳ ಗುಂಪೆಂದರೆ ನೀಟೇಲೀಸ್. ಸಸ್ಯಗಳ ರೂಪರಚನಾಶಾಸ್ತ್ರಜ್ಞರು ಹಾಗೂ ಭ್ರೂಣಶಾಸ್ತ್ರಜ್ಞರು ಕಳೆದ ಆರು ದಶಕಗಳಿಂದಲೂ ಈ ಗುಂಪಿನ ಬಗ್ಗೆ ಹೆಚ್ಚಿನ ಆಸಕ್ತಿ ಕುತೂಹಲಗಳಿಂದ ಸಂಶೋಧನಾನಿರತರಾಗಿದ್ದಾರೆ. ಇದಕ್ಕೆ ಮುಖ್ಯಕಾರಣ ಈ ಸಸ್ಯಗಳಲ್ಲಿ ಹೂಬಿಡುವ ಸಸ್ಯಗಳ ಕೆಲವು ಗುಣಲಕ್ಷಣಗಳಿರುವುದು. ಬಹುಕಾಲದಿಂದಲೂ ಸಸ್ಯವಿಜ್ಞಾನಿಗಳಿಗೆ ಈ ಅಂಶ ಒಡೆಯದ ಒಗಟಾಗಿದೆ. ಈ ಗುಂಪಿನ ಸಸ್ಯಗಳ ಲಕ್ಷಣಗಳನ್ನು ಪರಿಶೀಲಿಸಿದ ಎಲ್ಲರೂ ಕೂಡಲೇ ಹೂಬಿಡುವ ಸಸ್ಯಗಳ ಉಗಮಕ್ಕೆ ಸುಳಿವುಗಳು ಸಿಕ್ಕಿದವು ಎಂದು ಹೇಳುವುದುಂಟು. ಆದರೆ ಇವುಗಳ ಜೀವನಚಕ್ರದ ಎಲ್ಲ ಅಂಶಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದರೆ ಈ ಅಂಶಗಳು ತೋರಿಕೆಯವು ಎನ್ನಿಸುತ್ತದೆ. ಆದ್ದರಿಂದಲೇ ನೀಟೇಲೀಸ್ ಗಣದ ಸಸ್ಯಗಳು ರೂಪುರಚನಾ ಶಾಸ್ತ್ರಜ್ಞರ ಆಮಿಷ ಮತ್ತು ನೈರಾಶ್ಯ ಎನ್ನಲಾಗಿದೆ. ಒಂದು ಮಹತ್ತರ ಅಂಶವೆಂದರೆ ಇಂದಿನವರೆಗೂ ಹೂಬಿಡುವ ಸಸ್ಯಗಳ ಉಗಮಕ್ಕೆ ನೀಟೇಲೀಸ್ ಗುಂಪಿನ ಸಸ್ಯಗಳು ಕಾರಣವಾಗಿವೆ ಎಂಬುದನ್ನು ಆಧಾರಸಹಿತವಾಗಿ ತೋರಿಸಿಕೊಡಲಾಗಿಲ್ಲ. ಅಂತೆಯೇ ಇವಕ್ಕೂ ಹೂಬಿಡುವ ಸಸ್ಯಗಳಿಗೂ ಯಾವ ಹೋಲಿಕೆ, ಸಂಬಂಧಗಳೂ ಇಲ್ಲ ಎಂದು ಹೇಳುವುದಕ್ಕೂ ಸಾಧ್ಯವಾಗಿಲ್ಲ. ಇವುಗಳ ಪ್ರಾಚೀನ ಇತಿಹಾಸಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನೀಟೇಲೀಸ್ ಗುಂಪಿನ ಹೂಬಿಡುವ ಸಸ್ಯಗಳಿಗಿಂತ ತೀರ ಇತ್ತೀಚಿನವು.

	ಈ ಗಣದ ಮೂರು ಜಾತಿಗಳ ಪೈಕಿ ನೀಟಮಿನಲ್ಲಿ 40 ಪ್ರಭೇದಗಳಿವೆ. ಉಷ್ಣವಲಯದ ಅನೇಕ ಪ್ರದೇಶಗಳಲ್ಲಿ ಇವು ಕಾಣದೊರೆಯುವುವು. ಭಾರದ್ವಜ್ ಎಂಬವರ ಪ್ರಕಾರ ಭಾರತದಲ್ಲಿ ಇದರ 5 ಪ್ರಭೇದಗಳಿವೆ: ನೀಟಮ್ ನೀಮಾನ್, ನೀಟಮ್ ಊಲ, ನೀಟಮ್ ಮಾಂಟಾನಮ್, ನೀಟಮ್ ಕಂಟ್ರಾಕ್ಟಮ್ ಮತ್ತು ನೀಟಮ್ ಲ್ಯಾಟಿಪೋಲೀಯಮ್.

	ತಮ್ಮ ಸಾಮಾನ್ಯಸ್ವರೂಪದಲ್ಲಿ ನೀಟಮಿನ ಪ್ರಭೇದಗಳು ದ್ವಿದಳ ಸಸ್ಯಗಳಂತೆಯೇ ಕಾಣುತ್ತವೆ. ಕೆಲವು ಪ್ರಭೇದಗಳು ಸಣ್ಣಮರಗಳಂತೆ ಬೆಳೆದುಕೊಂಡರೆ (ಉದಾ: ನೀಟಮ್ ನೀಮಾನ್) ಮತ್ತೆ ಕೆಲವು ಅಡರುಸಸ್ಯಗಳು (ಉದಾ: ನೀಟಮ್ ಆಫ್ರಿಕಾನಮ್). ನೀಟಮ್ ಊಲ ಎಂಬುದು ದಪ್ಪ ಕಾಂಡವುಳ್ಳ ಒಂದು ದೈತ್ಯ ಅಡರುಸಸ್ಯ. ಸ್ಟ್ರೂಸ್ ಎಂಬಾತನ ಪ್ರಕಾರ ನೀಟಮ್ ಟ್ರೈನರ್ವೆ ಎಂಬ ಪ್ರಭೇದ ಎಂಬ ಪರಾವಲಂಬಿ. ಚಿಬರಸೋನ, ಸಿಂಕೋನ ಕಾಡುಗಳಲ್ಲಿ ಇದು ಬೆಳೆಯುತ್ತದೆ. ಅಡರುಸಸ್ಯಗಳಂತೆ ಬೆಳೆಯುವ ಪ್ರಭೇದಗಳಲ್ಲಿ ಎರಡು ಬಗೆಯ ಕವಲುಗಳು (ಮಿತಿ ಇಲ್ಲದ ಬೆಳವಣಿಗೆಯವು ಮತ್ತು ಸೀಮಿತ ಬೆಳವಣಿಗೆಯವು) ಇದ್ದರೂ ಮರದಂತೆ ಬೆಳೆಯುವ ಪ್ರಭೇದಗಳಲ್ಲಿ ಈ ಬಗೆಯ ವ್ಯತ್ಯಾಸ ಕಾಣದು. ಎಲೆಗಳ ಅಲಗು ದೊಡ್ಡದಾಗಿದ್ದು ಅಖಂಡವಾಗಿರುತ್ತದೆ.

	ಎಫಿಡ್ರ: ಎಫಿಡ್ರೇಸೀ ಕುಟುಂಬಕ್ಕೆ ಸೇರಿದೆ. ಇದು 42 ಪ್ರಭೇದಗಳನ್ನು ಒಳಗೊಂಡಿರುವ ಜಾತಿ. ಇವು ಪೂರ್ವ ಮತ್ತು ಪಶ್ಚಿಮಾರ್ಧ ಗೋಳಗಳೆರಡರ ಸಮಶೀತೋಷ್ಣವಲಯ ಹಾಗೂ ಉಷ್ಣವಲಯಗಳಲ್ಲಿ ಬೆಳೆಯುವುವು. ಭಾರತದಲ್ಲಿ ಆರು ಪ್ರಭೇದಗಳು ಉಂಟು: ಎಫಿಡ್ರ ಪೋಲಿಯೇಟ, ಎಂ. ಇಂಟರ್‍ಮೀಡಿಯ, ಎ. ಜಿರಾರ್ಡಿಯಾನ, ಎ. ಸ್ಯಾಕ್ಸಟಿಲಸ್, ಎ. ನೆಬ್ರೋಡೆನ್ನಿಸ್ ಮತ್ತು ಎ. ರಿಜೆಲಿಯಾನ, ಎಫಿಡ್ರ ಒಂದು ಕ್ಸೀರೋಫೈಟ್ (ಶುಷ್ಕಹವೆಗೆ ಒಗ್ಗಿಕೊಂಡು ಬೆಳೆಯುವ ಸಸ್ಯ). ಇದರ ಕಾಂಡ ಹಸಿರಾಗಿರುತ್ತದೆ ಮತ್ತು ಎಳೆಯದಾಗಿರುವಾಗ ದ್ಯುತಿಸಂಶ್ಲೇಷಣಾ ಕ್ರಿಯೆಯಲ್ಲಿ ಭಾಗವಹಿಸುತ್ತದೆ. ಕಾಂಡದ ಮೇಲೆ ಏಣುಗಳು ಉಂಟು. ಎಲೆಗಳು ಕ್ಷೀಣಗೊಂಡ ಹುರುಪೆಗಳಂತಿವೆ. ಕವಲುಗಳು ಎಲೆಗಳ ಕಕ್ಷಗಳಿಂದ ಮೂಡುತ್ತವೆ.

	ವೆಲ್ವಿಶ್ಚಿಯ: ವೆಲ್ವಿಶ್ಚಿಯೇಸೀ ಕುಟುಂಬಕ್ಕೆ ಸೇರಿದ ಜಾತಿ. ಇದರಲ್ಲಿ ವೆಲ್ವಿಶ್ಚಿಯ ಮಿರಾಬಲಿಸ್ ಎಂಬ ಒಂದೇ ಒಂದು  ಪ್ರಭೇದವುಂಟು. ದಕ್ಷಿಣ ಆಫ್ರಿಕದ ಸಮುದ್ರತೀರದ ಸುಮಾರು 600 ಮೈಲಿಗಳಷ್ಟು ಪ್ರದೇಶದಲ್ಲಿ ಮಾತ್ರ ಇಂದು ಕಂಡುಬರುತ್ತದೆ. ಮರುಭೂಮಿಯ ಹವಾಮಾನವಿರುವ ಈ ಪ್ರದೇಶದಲ್ಲಿ ವರ್ಷಕ್ಕೆ 2 ಸೆಂ.ಮೀ. ಮಳೆ ಬರುವುದು ಕಷ್ಟ. ಇಂಥ ಶುಷ್ಕ ಸನ್ನಿವೇಶಕ್ಕೆ ಇದು ಹೊಂದಿಕೊಂಡಿದೆಯಾಗಿ ಬೀಜಸಸ್ಯಗಳಲ್ಲೇ ಒಂದು ವಿಲಕ್ಷಣ ಸಸ್ಯವಾಗಿದೆ. ಇಡೀ ಸಸ್ಯ ಒಂದು ಬೃಹತ್ ಮೂಲಂಗಿಯಂತೆ ಅಥವಾ ಟರ್ನಿಪ್ ಗೆಡ್ಡೆಯಂತೆ ಕಾಣುತ್ತದೆ. ನೆಲದ ಮಟ್ಟಕ್ಕಿಂತ ಸ್ವಲ್ಪವೇ ಚಾಚಿಕೊಂಡಿರುತ್ತದೆ. ಶಿರೋಭಾಗ 3.5ರಿಂದ 4 ಮೀಟರ್‍ಗಳಷ್ಟು ಸುತ್ತಳತೆಯುಳ್ಳದ್ದಾಗಿದ್ದು ಸ್ವಲ್ಪ ಉಬ್ಬಿಕೊಂಡಿರುತ್ತದೆ. ಇದರಲ್ಲಿ ಎರಡು ಹಾಲೆಗಳೂ ಅವುಗಳಿಂದ ಚಾಚಿ ಬೆಳೆಯುವ ಚರ್ಮದ ಪಟ್ಟಿಯಂತಿರುವ ಎರಡು ಉದ್ದನೆಯ ಎಲೆಗಳೂ ಉಂಟು. ಇವು ಜೀವನದುದ್ದಕ್ಕೂ ಅವ್ಯಾಹತವಾಗಿ ಬೆಳೆಯುತ್ತಲೇ ಇರುತ್ತವೆ. ಕಾರಣ ಇವುಗಳ ತಳಭಾಗದಲ್ಲಿರುವ ವರ್ಧನ ಅಂಗಾಂಶ. ಇದರಿಂದಾಗಿ ನೆಲದ ಮೇಲೆ 3-3.5 ಮೀಟರ್‍ಗಳಷ್ಟು ಉದ್ದಕ್ಕೆ ಎಲೆಗಳು ಚಾಚಿಕೊಂಡಿರುವುವು. ಎಲೆಗಳ ತುದಿಗಳು ಒಮ್ಮೊಮ್ಮೆ ಸೀಳಿಕೊಂಡಿರುವುದುಂಟು. ಎಲೆಗಳು ನೂರು ವರ್ಷಗಳವರೆಗೂ ಶಾಶ್ವತವಾಗಿರಬಲ್ಲವೆಂದು ಹೇಳಲಾಗಿದೆ.

	ನೀಟೇಲೀಸ್ ಗಣದ ಸದಸ್ಯಗಳ ಇತರ ಸಾಮಾನ್ಯ ಗುಣಲಕ್ಷಣಗಳು ಈ ರೀತಿ ಇವೆ: 1. ಇವು ಮರಗಟ್ಟಿದ ಸಸ್ಯಗಳು. ಮರಗಳಂತೆ, ಪೊದೆಗಳಂತೆ, ದೈತ್ಯ ಅದರು ಸಸ್ಯಗಳಂತೆ, ಅಥವಾ ಮೂಲಂಗಿಯಂತೆ ಬೆಳೆಯುತ್ತವೆ. ಕಾಂಡದ ಸ್ವಲ್ಪಭಾಗ ಭೂಗತವಾಗಿರಬಹುದು. 

	2. ಎಲೆಗಳು ಅಭಿಮುಖ ಇಲ್ಲವೆ ಸುತ್ತು ಮಾದರಿಯಲ್ಲಿ ಜೋಡಣೆಗೊಂಡಿವೆ. ಪಟ್ಟೆಯ ಆಕಾರಕ್ಕಿರಬಹುದು ಇಲ್ಲವೆ ಸೂಕ್ಷ್ಮ ಹುರುಪೆಗಳಾಗಿ ಕ್ಷೀಣಗೊಂಡಿರಬಹುದು. 3. ದ್ವಿತೀಯಕ ಕ್ಸೈಲಮಿನಲ್ಲಿ ಟ್ರೇಕಿಯಗಳಿವೆ. 4. ಹೂಗಳು ಏಕಲಿಂಗಿಗಳು (ನೀಟಮಿನ ಕೆಲವು ದ್ವಿಲಿಂಗಿ ಪ್ರಭೇದಗಳನ್ನು ಬಿಟ್ಟು). ಇವು ಸಂಯುಕ್ತ ಸ್ಟ್ರೊಬೈಲೈಗಳಲ್ಲಿ (ಶಂಕುಗಳು) ಅಥವಾ ಹೂಗೊಂಚಲುಗಳಲ್ಲಿ ವ್ಯವಸ್ಥಿತಗೊಂಡಿವೆ. 5. ಹೆಣ್ಣು ಹೂವಿನಲ್ಲಿ ಒಂದೇ ಒಂದು ಅಂಡಕವಿದೆ. 6. ಅಂಡಕದ ನ್ಯೂಸೆಲಸ್ ಭಾಗದ ಸುತ್ತ ಎರಡು ಅಥವಾ ಮೂರು ಆವರಣಗಳುಂಟು. 7. ಸೂಕ್ಷ್ಮದ್ವಾರ ಒಂದು ಉದ್ದನೆಯ ನಳಿಕೆಯಂತೆ ಚಾಚಿಕೊಂಡಿದೆ. 8. ಗಂಡುಹೂಗಳಲ್ಲಿ ಪೆರಿಯಾಂತ್ ಹಾಗೂ ಪರಾಗಾಶಯಧರಗಳಿವೆ. ಪರಾಗಶಯಧರಗಳಲ್ಲಿ 1-8 ಸೈನಾಂಜಿಯಗಳುಂಟು. 9. ನಿಷೇಚನೆ ನಡೆಯುವುದು ಎರಡು ಲಿಂಗಾಣುಗಳಿರುವ ಪರಾಗನಳಿಕೆಯ ಸಹಾಯದಿಂದ. ವೆಲ್ವಿಶ್ಚಿಯದಲ್ಲಿ ಭ್ರೂಣಾಶಯನಳಿಕೆಗಳು ಮೇಲ್ಮುಖವಾಗಿ ಬೆಳೆಯುವುದರಿಂದ ನಿಷೇಚನೆ ಪರಾಗನಳಿಕೆಯೊಳಗೇ ಆಗುತ್ತದೆ. 10 ಭ್ರೂಣದಲ್ಲಿ ಎರಡು ಬೀಜ ಪತ್ರಗಳುಂಟು.

	ಆರ್ಥಿಕ ಪ್ರಾಮುಖ್ಯ: ಎಫಿಡ್ರದ ಕೆಲವು ಪ್ರಭೇದಗಳಿಂದ ಎಫಿಡ್ರಿನ್ ಅನ್ನು ಪಡೆಯಲಾಗುತ್ತಿದೆ. ಇದು ಗೂರಲಿಗೆ ಸಿದ್ಧೌಷದ. ಆರ್ಯರು ಸೋಮರಸವನ್ನು ಎಫಿಡ್ರದ ಪ್ರಭೇದವೊಂದರಿಂದ ತಯಾರಿಸುತ್ತಿದ್ದರೆಂದು ಹೇಳಲಾಗಿದೆ. ಇದಕ್ಕೆ ಸಾಕಷ್ಟು ಆಧಾರಗಳಿಲ್ಲ. ಕಾಡುಗಳಲ್ಲಿ ಬೆಳೆಯುವ ನೀಟಮ್ ಪ್ರಭೇದಗಳನ್ನು ಸೌದೆಗಾಗಿ ಬಳಸಿಕೊಳ್ಳಲಾಗುತ್ತಿದೆ.
(ಡಿ.ಎ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ